ದುರ್ವಾಸ -
ಒಬ್ಬ ಮಹರ್ಷಿ. ಅತ್ರಿಮಹರ್ಷಿಯಿಂದ ಅನುಸೂಯೆಯಲ್ಲಿ ಶಂಕರನ ಅಂಶದಿಂದ ಜನಿಸಿದವ. ದತ್ತಾತ್ರೇಯ, ಚಂದ್ರ, ಆರ್ಯಮ, - ಈತನ ಸಹೋದರರು.

ಒಮ್ಮೆ ಕುಂತೀಭೋಜನ ಮಗಳಾದ ಕುಂತಿ ಮಾಡಿದ ಶುಶ್ರೂಷೆಯಿಂದ ಸಂತೃಪ್ತಿಗೊಂಡು ಆಕೆಗೆ ಯಾವ ದೇವತೆಯನ್ನಾದರೂ ವಶಪಡಿಸಿಕೊಳ್ಳಬಹುದಾದ ಮಹಿಮೆಯುಳ್ಳ ಮಂತ್ರಗಳನ್ನು ಉಪದೇಶಿಸಿದ. ಆ ಮಂತ್ರಗಳ ಮಹಿಮೆಯಿಂದಲೇ ಕುಂತಿ ಕರ್ಣ ಯುಧಿಷ್ಠಿರ ಭೀಮಾರ್ಜುನರನ್ನೂ ಮಾದ್ರಿ ನಕುಲ ಸಹದೇವರನ್ನೂ ಪಡೆದುದು.

ದುರ್ಯೋಧನ ದುರ್ವಾಸನಿಗೆ ಹಲವು ಆತಿಥ್ಯ ಮಾಡಿ ಅನುಗ್ರಹಕ್ಕೆ ಪಾತ್ರನಾಗಿ, ವನವಾಸದಲ್ಲಿದ್ದ ಪಾಂಡವರಲ್ಲಿಗೆ ಅವೇಳೆಯಲ್ಲಿ ಹೋಗಿ ಅನ್ನವನ್ನು ಬೇಡಿ , ಅವರಿಗೆ ಶಾಪ ಕೊಡಬೇಕೆಂದು ಹೇಳಿ ಕಳುಹಿಸಿದ. ಆದರೆ ಶ್ರೀಕೃಷ್ಣನ ಕೃಪೆಯಿದ್ದ ಪಾಂಡವರಲ್ಲಿ ಊಟ ಮಾಡದೇ ಹೊಟ್ಟೆ ತುಂಬಿತಾಗಿ ದುರ್ವಾಸ ತನ್ನ ಶಿಷ್ಯರೊಂದಿಗೆ ಅಲ್ಲಿಂದ ಹೊರಟುಹೋದ.
ಒಮ್ಮೆ ಅಂಬರೀಷನಲ್ಲಿಗೆ ಹೋಗಿ, ಅವನನ್ನು ಕೊಲ್ಲಲು ದುರ್ದೇವತೆಯನ್ನು ಸೃಷ್ಟಿಸಿದ. ಅಂಬರೀಷ ವಿಷ್ಣುಚಕ್ರವನ್ನು ಪ್ರಾರ್ಥಿಸಲು ಅದರ ಭಯದಿಂದ ಅಂಬರೀಷನನ್ನೇ ಮರೆಹೊಕ್ಕು ಬದುಕಿಕೊಂಡ.

ಶ್ವೇತಕಿಯೆಂಬ ಅರಸನಿಂದ ಅನೇಕ ಯಜ್ಞಗಳನ್ನು ಮಾಡಿಸಿದ, ಕುರುಕ್ಷೇತ್ರದಲ್ಲಿ ವಾಸಮಾಡುವ ಮುದ್ಗಲ ಅಥವಾ ವ್ರೀಹಿದ್ರೋಣನೆಂಬ ವಹರ್ಷಿಯನ್ನು ಪರೀಕ್ಷಿಸಿ ಅನುಗ್ರಹಿಸಿದ.

ಒಮ್ಮೆ ಈತ ದೇವಲೋಕಸಂಚಾರ ಮಾಡಿ ಬರುತ್ತಿರಲು ವಿದ್ಯಾಧರೆಯೊಬ್ಬಳ ಕೈಯಲ್ಲಿದ್ದ ಹೂಮಾಲೆಯನ್ನು ಕಂಡು, ಮೋಹಭರಿತನಾಗಿ ಅವಳಲ್ಲಿ ಬೇಡಿ ಅದನ್ನು ಪಡೆದು, ತಲೆಗೆ ಸುತ್ತಿಕೊಂಡು ಬರುತ್ತಿದ್ದ. ಆಗ ಇಂದ್ರ ಶಚಿಯೊಂದಿಗೆ ಐರಾವತದ ಮೇಲೆ ಬರುತ್ತಿರುವುದನ್ನು ಕಂಡು ಆ ಮಾಲೆಯನ್ನು ಇಂದ್ರನ ಮೇಲೆಸೆದ. ಇಂದ್ರ ಅದನ್ನು ಐರಾವತದ ಕುಂಭ ಸ್ಥಳದ ಮೇಲೆ ಹಾಕಿದ. ಐರಾವತ ಅದರ ಪರಿಮಳದಿಂದ ಮದಿಸಿ ಹೂಮಾಲೆಯನ್ನು ನೆಲಕ್ಕೆಸೆಯಿತು. ಇದರಿಂದ ಕ್ರೋಧಗೊಂಡ ದುರ್ವಾಸ ಆತನ ಮೂರು ಲೋಕದ ಸಂಪತ್ತೂ ನಾಶವಾಗಲಿ ಎಂದು ಶಾಪವಿತ್ತ.

 ಶ್ರೀರಾಮ ತನ್ನ ಅವತಾರವನ್ನು ಮುಗಿಸಿ, ವೈಕುಂಠಕ್ಕೆ ತೆರಳುವ ಮೊದಲು ಯಮನೊಂದಿಗೆ ರಹಸ್ಯವಾಗಿ ಮಾತನಾಡುತ್ತಿರುವಾಗ ಲಕ್ಷ್ಮಣನನ್ನು ಬಾಗಿಲಲ್ಲಿ ಕಾವಲಿಟ್ಟು ಯಾರೊಬ್ಬರನ್ನೂ ಒಳಗೆ ಬಿಡಲಾಗದು ಎಂದು ಆಜ್ಞಾಪಿಸಿದ. ಆ ಹೊತ್ತಿನಲ್ಲಿ ತ್ರಿಕಾಲಜ್ಞನಾದ ದುರ್ವಾಸ ಅಲ್ಲಿಗೆ ಬಂದು ಈ ನಿಮಿಷದಲ್ಲಿಯೇ ನಾನು ಬಂದಿರುವ ವಾರ್ತೆಯನ್ನು ರಾಮನಿಗೆ ತಿಳಿಸು; ಇಲ್ಲವಾದರೆ ಅಯೋಧ್ಯೆಯನ್ನು ರಾಮನನ್ನು ಶಪಿಸಿ, ನಿಮ್ಮ ವಂಶವನ್ನೇ ದಹಿಸುವೆ ಎಂದ. ಇದರಿಂದ ಹೆದರಿದ ಲಕ್ಷ್ಮಣ ತನ್ನೊಬ್ಬನ ಅಂತ್ಯವಾದರೂ ಚಿಂತೆಯಿಲ್ಲವೆಂದುಕೊಂಡು ರಾಮನಿಗೆ, ದುರ್ವಾಸ ಬಂದಿರುವ ಸುದ್ದಿಯನ್ನು ತಿಳಿಸಿದ. ಒಡನೆಯೇ ರಾಮ ಬಂದು ವಿಚಾರಿಸಲಾಗಿ ದುರ್ವಾಸ - `ಅಯ್ಯಾ, ನಾನು ಬಹಳ ದಿನಗಳಿಂದಲೂ ನಿಯಮದಲ್ಲಿದ್ದೆ. ಇಂದು ಪಾರಣೆಗಾಗಿ ನಿನ್ನಲ್ಲಿಗೆ ಬಂದಿದ್ದೇನೆ ಎನ್ನಲು ರಾಮ ಸಂತೋಷದಿಂದ ಆತನಿಗೆ ಮೃಷ್ಟಾನ್ನ ಭೋಜನವನ್ನಿಕ್ಕಿ ತೃಪ್ತಿಗೊಳಿಸಿದ. ಈ ರೀತಿಯಿಂದ ದುರ್ವಾಸ ಲಕ್ಷ್ಮಣನನ್ನು ಶಿರಚ್ಛೇದನಕ್ಕೆ ಗುರಿ ಮಾಡಿ ಆತನ ಅವತಾರ ಸಮಾಪ್ತಿಗೆ ಕಾರಣನಾದ. 

	ಒಮ್ಮೆ ಭೂಪ್ರದಕ್ಷಿಣೆಗೆ ಹೊರಟ ಈ ಮುನಿ ಕಾಶೀ ಕ್ಷೇತ್ರಕ್ಕೆ ಬಂದ, ಒಡನೆಯೇ ಈತನ ಮನಸ್ಸು ಶಾಂತಿ ಸಮಾಧಾನಗಳಿಂದ ತುಂಬಿತು. ಕಾಶೀ ಕ್ಷೇತ್ರವನ್ನು ಹೊಗಳಿ ತಪಸ್ಸು ಮಾಡಲಾರಂಭಿಸಿದ. ಆದರೆ ಭಗವಂತ ಪ್ರಸನ್ನನಾಗಲಿಲ್ಲ; ಕ್ರೋಧಗೊಂಡ ಮುನಿ ಕ್ಷೇತ್ರವನ್ನೇ ಶಪಿಸಲು ಮನಸ್ಸು ಮಾಡಿದ. ಇದನ್ನರಿತ ಈಶ್ವರ ಮೈದೋರಿ ಮುನಿಯನ್ನು ಸಮಾಧಾನ ಪಡಿಸಿ, ಮುಕ್ತಿ ದೊರೆಯುವ ಈ ಕ್ಷೇತ್ರದಲ್ಲಿ ನೀನು ಬೇಡುವ ವರವಾದರೂ ಯಾವುದು ಎಂದು ಕೇಳಿದ. ಆಗ ಮುನಿ ತನ್ನ ತಿಳಿಗೇಡಿತನಕ್ಕೆ ತಾನೇ ನಾಚಿ ಭಗವಂತನನ್ನು ಪ್ರಾರ್ಥಿಸಿ ಜ್ಞಾನಸಿದ್ಧಿಯನ್ನು ಪಡೆದ.								(ಎಸ್.ಎಂ.ಎ.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ